ಉತ್ತರಾಣಿ: ಅಮರಾಂತೇಸಿ ಕುಟುಂಬದ ನೂರು ಪ್ರಭೇದಗಳಲ್ಲಿ ಒಂದಾದ ಗಿಡ (ಆಕಿರಾಂಥೀಸ್). ರಾಜಗಿರಿ, ಶಿರಸಾಲ ಗಿಡಗಳ ಗುಂಪಿಗೆ ಸೇರಿದೆ. ಇದೊಂದು ಪೊದರುಗಿಡ. 2'-3' ಎತ್ತರ: ಬಲು ಕವಲುಗಳು, ಬೂದುಬಣ್ಣದ ಚಚ್ಚೌಕ ಕಾಂಡ, ಕಾಂಡದ ಗಿಣ್ನಿನ ಮೇಲೆ ಎದುರುಬದುರು ಜೋಡಣೆ ಗೊಂಡಿರುವ, 3"-4" ಉದ್ದದ, ಮಿತ ಸಂಖ್ಯೆಯ ಎಲೆಗಳು-ಇಷ್ಟು ಉತ್ತರಾಣಿಯ ವೈಶಿಷ್ಟ್ಯ. ನವೆಂಬರಿ ನಿಂದ ಜನವರಿವರೆಗೆ ಗಿಡದಲ್ಲಿ ವಿಪುಲವಾಗಿ ಹೂಗಳು ಅರಳುತ್ತವೆ. ಅವುಗಳ ಬಣ್ಣನೀಲಿ ಮಿಶ್ರಿತ ಬಿಳಿ; ತೆನೆತೆನೆಯಾಗಿ ಜೋಡಿಗೊಂಡಿರು ತ್ತವೆ. ಇವು ಉದುರಿ ಕಾಯಿ ಆಗುವ ವೇಳೆಗೆ ತೆನೆಗಳು 16"-18" ಉದ್ದವಾಗು ವುವು. ಕಾಯಲ್ಲಿ ಏಕಕೋಶದವು ಮತ್ತು ಏಕಬೀಜದವು ಇರುವುದುಂಟು.

ಉತ್ತರಾಣಿ ಒಂದು ಕಳೆಗಿಡ. ಭಾರತ, ಪಾಕಿಸ್ತಾನಗಳಲ್ಲಿ ಇದರ ವ್ಯಾಪ್ತಿ ಇದೆ: ಮುಖ್ಯವಾಗಿ ಹಾಳು ನೆಲದಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ. ಗಿಡದ ಬೂದಿಗೆ ಸಂಸ್ಕೃತದಲ್ಲಿ ಅಪಾಮಾರ್ಗವೆಂದು ಹೆಸರು. ಇದೊಂದು ಕ್ಷಾರವಸ್ತು. ಬಟ್ಟೆ ಬರೆಗಳನ್ನು ಸ್ವಚ್ಛಗೊಳಿಸುವಲ್ಲಿ. ಅವುಗಳಿಗೆ ಬಣ್ಣಹಾಕುವಾಗ ಇದರ ಉಪಯೋಗವಿದೆ. ಗಿಡದ ಇತರ ಉತ್ಪನ್ನಗಳಿಗೆ ಔಷಧೀಯ ಗುಣಗಳೂ ಇವೆ. ಎಳೆ ಎಲೆಗಳನ್ನು ಸೊಪ್ಪು ತರಕಾರಿಯಾಗಿ ಉಪಯೋಗಿಸುತ್ತಾರೆ. ವ್ರತ, ನಿಯಮಗಳಲ್ಲಿಯೂ ಬಳಸುವುದಿದೆ.    				(ಎಂ.ಎಸ್.ಎಸ್.ಆರ್.;ಡಿ.ಎಂ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ